ಕಳೆದ ಹತ್ತು ವರ್ಷಗಳಲ್ಲಿ ಭಾರತವು ಜಾಗತಿಕ ವೇದಿಕೆಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಭಾರತದ ವಿದೇಶಾಂಗ ನೀತಿ, ರಾಜತಾಂತ್ರಿಕ ಸಂಬಂಧಗಳು ಹಾಗೂ ಅಂತರರಾಷ್ಟ್ರೀಯ ಸಹಕಾರಕ್ಕೆ ದೊರೆತ ಮನ್ನಣೆಯ ಪ್ರತೀಕವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ವಿಶ್ವದ ಅನೇಕ ರಾಷ್ಟ್ರಗಳು ತಮ್ಮ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ಪ್ರದಾನಿಸಿವೆ. (PM Modi Awards in Kannada)
ಇಲ್ಲಿಯವರೆಗೆ 15ಕ್ಕೂ ಹೆಚ್ಚು ದೇಶಗಳು ಈ ಅಪರೂಪದ ಗೌರವ ನೀಡಿ ಭಾರತದೊಂದಿಗೆ ತಮ್ಮ ಸ್ನೇಹ ಮತ್ತು ವಿಶ್ವಾಸವನ್ನು ವ್ಯಕ್ತಪಡಿಸಿವೆ. ಈ ಪ್ರಶಸ್ತಿಗಳು ಕೇವಲ ಪ್ರಧಾನಿ ಮೋದಿ ಅವರ ವೈಯಕ್ತಿಕ ಸಾಧನೆಯಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿ ಭಾರತದ ಹೆಚ್ಚುತ್ತಿರುವ ಪ್ರಭಾವ, ಪ್ರತಿಷ್ಠೆ ಮತ್ತು 140 ಕೋಟಿ ಭಾರತೀಯರ ಗೌರವದ ಸಂಕೇತವಾಗಿವೆ. ಪ್ರಧಾನಿ ಮೋದಿ ಅವರಿಗೆ ಲಭಿಸಿರುವ ಪ್ರಮುಖ ಅಂತರರಾಷ್ಟ್ರೀಯ ನಾಗರಿಕ ಗೌರವಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಪ್ರಮುಖ ದೇಶಗಳ ಅತ್ಯುನ್ನತ ನಾಗರಿಕ ಗೌರವಗಳು

ರಷ್ಯಾದ ಅತ್ಯುನ್ನತ ಗೌರವ: ‘ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪಾಸ್ತಲ್’
ಭಾರತ ಮತ್ತು ರಷ್ಯಾ ದೇಶಗಳ ನಡುವೆ ದಶಕಗಳ ಹಳೆಯ ಸ್ನೇಹವಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ದ್ವಿಪಕ್ಷೀಯ ಮತ್ತು ಕಾರ್ಯತಂತ್ರದ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಕ್ಕಾಗಿ ರಷ್ಯಾ ಸರ್ಕಾರವು ತನ್ನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಜುಲೈ 2024 ರಲ್ಲಿ ಮೋದಿ ಅವರು ರಷ್ಯಾ ಪ್ರವಾಸ ಕೈಗೊಂಡಿದ್ದಾಗ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಈ ಪ್ರಶಸ್ತಿಯನ್ನು ಅಧಿಕೃತವಾಗಿ ಪ್ರದಾನ ಮಾಡಿದರು. ಈ ಅತ್ಯುನ್ನತ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ನಾಯಕ ನರೇಂದ್ರ ಮೋದಿ ಅವರಾಗಿದ್ದಾರೆ.
ಫ್ರಾನ್ಸ್ನ ಅತ್ಯುನ್ನತ ಪ್ರಶಸ್ತಿ: ‘ಗ್ರಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್’
ಜುಲೈ 2023 ರಲ್ಲಿ ಫ್ರಾನ್ಸ್ನ ಪ್ರಸಿದ್ಧ ‘ಬಾಸ್ಟಿಲ್ ಡೇ’ ದಿನಚರಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾಗ ಪ್ರಧಾನಿ ಮೋದಿ ಅವರಿಗೆ ಈ ಗೌರವ ಒದಗಿಸಲಾಯಿತು . ಇದು ಫ್ರಾನ್ಸ್ ದೇಶದ ಪ್ರಮುಖ ನಾಗರಿಕ ಮತ್ತು ಮಿಲಿಟರಿ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಪ್ರಧಾನಿ ಎಂಬ ದಾಖಲೆಗೆ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. ಇದು ಭಾರತ ಮತ್ತು ಫ್ರಾನ್ಸ್ ನಡುವಿನ ರಕ್ಷಣಾ ಹಾಗೂ ಆರ್ಥಿಕ ಸಂಬಂಧದ ಬಾವೈಕ್ಯವನ್ನು ತೋರಿಸುತ್ತದೆ.
ಅಮೆರಿಕದ ಉನ್ನತ ಗೌರವ: ಲೆಜಿಯನ್ ಆಫ್ ಮೆರಿಟ್
2020 ರಲ್ಲಿ ಅಮೆರಿಕ ಸರ್ಕಾರವು ತನ್ನ ಶಸ್ತ್ರ ಪಡೆಗಳ ಪ್ರಮುಖ ಪ್ರಶಸ್ತಿಗಳಲ್ಲಿ ಒಂದಾದ ‘ಲೆಜಿಯನ್ ಆಫ್ ಮೆರಿಟ್’ ಅನ್ನು ಪ್ರಧಾನಿ ಮೋದಿ ಅವರಿಗೆ ಕೊಡಲಾಯಿತು . ಭಾರತ ಮತ್ತು ಅಮೆರಿಕ ನಡುವಿನ ಕಾರ್ಯಾಚಟುವಟಿಕೆಯ ಪಾಲುದಾರಿಕೆಯನ್ನು ಹೆಚ್ಚಿಸಲು ಮತ್ತು ಜಾಗತಿಕ ಶಕ್ತಿಯಾಗಿ ಭಾರತದ ಬೆಳವಣಿಗೆಗೆ ನೀಡಿದ ಅಪ್ರತಿಮ ನಾಯಕತ್ವಕ್ಕಾಗಿ ಈ ಗೌರವವನ್ನು ನೀಡಲಾಗಿದೆ.
ಭೂತಾನ್ನ ಅತ್ಯುನ್ನತ ಪ್ರಶಸ್ತಿ: ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋ
ಮಾರ್ಚ್ 2024 ರಲ್ಲಿ ಭೂತಾನ್ ಪ್ರವಾಸದ ಸಂದರ್ಭದಲ್ಲಿ ಅಲ್ಲಿನ ರಾಜರು ಪ್ರಧಾನಿ ಮೋದಿ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಈ ಅತ್ಯುನ್ನತ ಪ್ರಶಸ್ತಿಯನ್ನು ಪಡೆದ ವಿಶ್ವದ ಮೊದಲ ವಿದೇಶಿ ಸರ್ಕಾರಿ ಮುಖ್ಯಸ್ಥರು ಪ್ರಧಾನಿ ಮೋದಿ ಅವರಾಗಿದ್ದಾರೆ. ನೆರೆಹೊರೆಯ ದೇಶಗಳಿಗೆ ಮೊದಲ ಆದ್ಯತೆ ನೀಡುವ ಭಾರತದ ನೀತಿ ಮತ್ತು ಭೂತಾನ್ಗೆ ನೀಡಿದ ನಿರಂತರ ಬೆಂಬಲಕ್ಕೆ ಕೃತಜ್ಞತೆಯಾಗಿ ಇದನ್ನು ನೀಡಲಾಗಿದೆ.
ನೈಜೀರಿಯಾ ದೇಶದ ಅತ್ಯುನ್ನತ ಗೌರವ:
ನವೆಂಬರ್ 2024 ರ ನೈಜೀರಿಯಾ ಪ್ರವಾಸದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರಿಗೆ ‘ಗ್ರಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬ್ರಿಟನ್ನ ರಾಣಿ ಎಲಿಜಬೆತ್ ಅವರನ್ನು ಹೊರತುಪಡಿಸಿ ನೈಜೀರಿಯಾದ ಈ ಅತ್ಯುನ್ನತ ಪ್ರಶಸ್ತಿಯನ್ನು ಪಡೆದ ಏಕೈಕ ವಿದೇಶಿ ನಾಯಕ ನಮ್ಮ ದೇಶದ ಪ್ರಧಾನಿ ಮೋದಿ ಅವರಾಗಿದ್ದಾರೆ. ಇದು ಆಫ್ರಿಕಾ ಖಂಡದಲ್ಲಿ ಭಾರತಕ್ಕಿರುವ ಗೌರವವನ್ನು ಎತ್ತಿ ತೋರಿಸುತ್ತದೆ.
ಇಸ್ಲಾಮಿಕ್ ರಾಷ್ಟ್ರಗಳಿಂದ ಸಂದ ಪ್ರಮುಖ ಗೌರವಗಳು

ಅರಬ್ ಮತ್ತು ಇಸ್ಲಾಮಿಕ್ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧವನ್ನು ಸುಧಾರಿಸುವಲ್ಲಿ ಪ್ರಧಾನಿ ಮೋದಿ ಅವರ ವಿದೇಶಾಂಗ ನೀತಿ ದೊಡ್ಡ ಯಶಸ್ಸು ಕಂಡಿದೆ. ಇದಕ್ಕೆ ಸಾಕ್ಷಿಯಾಗಿ ಹಲವು ಮುಸ್ಲಿಂ ರಾಷ್ಟ್ರಗಳು ತಮ್ಮ ಅತ್ಯುನ್ನತ ಪ್ರಶಸ್ತಿಗಳನ್ನು ನೀಡಿವೆ:
ಯುಎಇ – ಆರ್ಡರ್ ಆಫ್ ಜಾಯೆದ್ (2019):
ಭಾರತ ಮತ್ತು ಯುಎಇ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಕ್ಕಾಗಿ ಯುಎಇ ತನ್ನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪ್ರಧಾನಿ ಮೋದಿ ಅವರಿಗೆ ಪ್ರದಾನ ಮಾಡಿತು.
ಸೌದಿ ಅರೇಬಿಯಾ – ‘ಕಿಂಗ್ ಅಬ್ದುಲಜೀಸ್ ಸಾಶ್’ (2016):
ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದಾಗ ಪ್ರಧಾನಿ ಮೋದಿ ಅವರಿಗೆ ಅಲ್ಲಿನ ಅತ್ಯುನ್ನತ ನಾಗರಿಕ ಗೌರವವನ್ನು ನೀಡಲಾಯಿತು. ಮುಸ್ಲಿಮರ ನಾಯಕರಿಗೆ ಸೌದಿ ಅರೇಬಿಯಾ ನೀಡುವ ಅಪರೂಪದ ಗೌರವಗಳಲ್ಲಿ ಇದು ಒಂದಾಗಿದೆ.
ಈಜಿಪ್ಟ್ – ‘ಆರ್ಡರ್ ಆಫ್ ದಿ ನೈಲ್’ (2023):
ಜೂನ್ 2023 ರಲ್ಲಿ ಪ್ರಧಾನಿ ಮೋದಿ ಈಜಿಪ್ಟ್ಗೆ ಭೇಟಿ ನೀಡಿದ್ದಾಗ ಅಲ್ಲಿನ ಅಧ್ಯಕ್ಷರು ಈ ಗೌರವವನ್ನು ನೀಡಿದರು. ಇದು ಎರಡು ದೇಶಗಳ ಸಂಬಂಧಗಳನ್ನು ಉತ್ತಮಗೊಳಿಸಲು ಶ್ರಮಿಸಿದ ಜಾಗತಿಕ ನಾಯಕರಿಗೆ ನೀಡಲಾಗುವ ಈಜಿಪ್ಟ್ನ ಅತ್ಯುನ್ನತ ಪ್ರಶಸ್ತಿಯಾಗಿದೆ.
ಪ್ಯಾಲೇಸ್ಟೈನ್ – ‘ಗ್ರಾಂಡ್ ಕಾಲರ್’ (2018):
ಪ್ಯಾಲೇಸ್ಟೈನ್ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದಾಗ ಮೋದಿ ಅವರಿಗೆ ಈ ಗೌರವ ನೀಡಲಾಯಿತು. ಭಾರತವು ಪ್ಯಾಲೇಸ್ಟೈನ್ನ ಅಭಿವೃದ್ಧಿಗೆ ನೀಡುತ್ತಿರುವ ನಿರಂತರ ಬೆಂಬಲವನ್ನು ಶ್ಲಾಘಿಸಿ ಅಲ್ಲಿನ ಅಧ್ಯಕ್ಷರು ಈ ಪ್ರಶಸ್ತಿ ನೀಡಿದರು.
ಮಾಲ್ಡೀವ್ಸ್ – ‘ರೂಲ್ ಆಫ್ ನಿಶಾನ್ ಇಜ್ಜುದ್ದೀನ್’ (2019):
ಹಿಂದೂ ಮಹಾಸಾಗರ ಪ್ರದೇಶದಲ್ಲಿ ಮಾಲ್ಡೀವ್ಸ್ ದೇಶಕ್ಕೆ ಭಾರತ ನೀಡಿದ ಆರ್ಥಿಕ ಮತ್ತು ರಕ್ಷಣಾತ್ಮಕ ಬೆಂಬಲಕ್ಕೆ ಧನ್ಯವಾದ ರೂಪದಲ್ಲಿ ಈ ಅತ್ಯುನ್ನತ ಗೌರವವನ್ನು ನೀಡಲಾಯಿತು.
ಪೆಸಿಫಿಕ್ ಮತ್ತು ಕೆರಿಬಿಯನ್ ದ್ವೀಪ ರಾಷ್ಟ್ರಗಳ ಗೌರವ
ವಿಶ್ವದ ಸಣ್ಣ ಸಣ್ಣ ದ್ವೀಪ ರಾಷ್ಟ್ರಗಳ ಕಷ್ಟ ಸುಖಗಳಿಗೆ ಸ್ಪಂದಿಸುವ ಮೂಲಕ ಭಾರತ ಜಾಗತಿಕ ಮಟ್ಟದಲ್ಲಿ ದೊಡ್ಡಣ್ಣನ ಜವಾಬ್ದಾರಿ ನಿಭಾಯಿಸಿದೆ. ಇದಕ್ಕಾಗಿ ಈ ಕೆಳಗಿನ ದೇಶಗಳು ಗೌರವ ಸಲ್ಲಿಸಿವೆ:
ಪಪುವಾ ನ್ಯೂಗಿನಿಯಾ ಮತ್ತು ಫಿಜಿ (2023):
ಮೇ 2023 ರಲ್ಲಿ ಈ ಎರಡು ಪೆಸಿಫಿಕ್ ದ್ವೀಪ ರಾಷ್ಟ್ರಗಳು ತಮ್ಮ ದೇಶದ ಅತ್ಯುನ್ನತ ಪ್ರಶಸ್ತಿಗಳನ್ನು ನೀಡಿ ಗೌರವಿಸಿದವು. ಜಾಗತಿಕವಾಗಿ ಈ ಸಣ್ಣ ದೇಶಗಳ ಧ್ವನಿಯಾಗಿ ಭಾರತ ನಿಂತಿದ್ದಕ್ಕೆ ಈ ಗೌರವ ಸಂದಿದೆ.
ಗಯಾನ ಮತ್ತು ಡೊಮಿನಿಕಾ (2024):
ನವೆಂಬರ್ 2024 ರಲ್ಲಿ ಈ ಕೆರಿಬಿಯನ್ ರಾಷ್ಟ್ರಗಳು ತಮ್ಮ ಅತ್ಯುನ್ನತ ಪ್ರಶಸ್ತಿಯನ್ನು ಮೋದಿ ಅವರಿಗೆ ನೀಡಿದವು. ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ‘ವ್ಯಾಕ್ಸಿನ್ ಮೈತ್ರಿ’ ಅಭಿಯಾನದ ಮೂಲಕ ಡೊಮಿನಿಕಾ ದೇಶಕ್ಕೆ ಉಚಿತ ಲಸಿಕೆಗಳನ್ನು ನೀಡಿ ಜೀವ ಉಳಿಸಿದ್ದಕ್ಕಾಗಿ ಅಲ್ಲಿನ ಸರ್ಕಾರ ಈ ಕೃತಜ್ಞತೆ ಸಲ್ಲಿಸಿತು.
ಜಾಗತಿಕ ಸಂಸ್ಥೆಗಳು ಮತ್ತು ಶಾಂತಿ ಪ್ರಶಸ್ತಿಗಳು

ಕೇವಲ ದೇಶಗಳು ಮಾತ್ರವಲ್ಲದೆ, ವಿಶ್ವದ ಪ್ರಮುಖ ಜಾಗತಿಕ ಸಂಸ್ಥೆಗಳು ಕೂಡ ಪ್ರಧಾನಿ ಮೋದಿ ಅವರ ಜನಪರ ಯೋಜನೆಗಳು ಮತ್ತು ಪರಿಸರ ಕಾಳಜಿಯನ್ನು ಗುರುತಿಸಿ ಪ್ರಶಸ್ತಿ ನೀಡಿವೆ:
ವಿಶ್ವಸಂಸ್ಥೆಯ ‘ಚಾಂಪಿಯನ್ಸ್ ಆಫ್ ದಿ ಅರ್ಥ್’ (2018):
ಪರಿಸರ ಸಂರಕ್ಷಣೆ ಮತ್ತು ಸೌರಶಕ್ತಿಯನ್ನು ಉತ್ತೇಜಿಸಲು ‘ಇಂಟರ್ನ್ಯಾಷನಲ್ ಸೋಲಾರ್ ಅಲಯನ್ಸ್’ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ವಿಶ್ವಸಂಸ್ಥೆಯು ಈ ಅತ್ಯುನ್ನತ ಪರಿಸರ ಪ್ರಶಸ್ತಿಯನ್ನು ನೀಡಿತು.
ಸಿಯೋಲ್ ಶಾಂತಿ ಪ್ರಶಸ್ತಿ (2018):
ದಕ್ಷಿಣ ಕೊರಿಯಾ ನೀಡುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಅಂತರರಾಷ್ಟ್ರೀಯ ಸಹಕಾರ ಜಾಗತಿಕ ಆರ್ಥಿಕ ಬೆಳವಣಿಗೆ ಮತ್ತು ಮೋದಿನಾಮಿಕ್ಸ್ ಮೂಲಕ ಭಾರತದ ಆರ್ಥಿಕತೆಯನ್ನು ಸುಧಾರಿಸಿದ್ದಕ್ಕಾಗಿ ನೀಡಲಾಯಿತು.
ಗ್ಲೋಬಲ್ ಗೋಲ್ಕೀಪರ್ ಪ್ರಶಸ್ತಿ (2019):
ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್ ವತಿಯಿಂದ ಈ ಪ್ರಶಸ್ತಿಯನ್ನು ನೀಡಲಾಯಿತು. ಭಾರತದಲ್ಲಿ ಕೋಟ್ಯಂತರ ಜನರಿಗೆ ಶೌಚಾಲಯಗಳನ್ನು ನಿರ್ಮಿಸಿಕೊಟ್ಟು ನಿರ್ಮೂಲನೆ ಸುಧಾರಿಸಿದ ವಿಶ್ವದ ಅತಿದೊಡ್ಡ ಸ್ವಚ್ಛತಾ ಅಭಿಯಾನವಾದ ಸ್ವಚ್ಛ ಭಾರತ ಅಭಿಯಾನ ಯಶಸ್ಸಿಗಾಗಿ ಈ ಜಾಗತಿಕ ಗೌರವ ಲಭಿಸಿತು.
ಹೆಚ್ಚುವರಿ ಹೆಮ್ಮೆಯ ಪ್ರಶಸ್ತಿಗಳು:
ಗ್ರೀಸ್ ದೇಶದ ಗ್ರಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್ (2023):
ಭಾರತ-ಗ್ರೀಸ್ ನಡುವಿನ ಸುದೀರ್ಘ ಸ್ನೇಹ ಮತ್ತು ಆರ್ಥಿಕ ಬಾಂಧವ್ಯವನ್ನು ಜಾಗತಿಕ ಮಟ್ಟಕ್ಕೆ ಕರೆದುಕೊಂಡು ಹೋಗಿದ್ದಕಾಗಿ ಗ್ರೀಸ್ ಸರ್ಕಾರವು ವಿದೇಶಿ ಸರ್ಕಾರಿ ಮುಖ್ಯಸ್ಥರಿಗೆ ನೀಡಲಾಗುವ ತನ್ನ ಅತ್ಯುನ್ನತ ನಾಗರಿಕ ಗೌರವವನ್ನು ಪಿಎಂ ಮೋದಿ ಅವರಿಗೆ ನೀಡಿ ಸತ್ಕರಿಸಿತು.
ಬಹ್ರೇನ್ ದೇಶದ ‘ಕಿಂಗ್ ಹಮದ್ ಆರ್ಡರ್ ಆಫ್ ದಿ ರೆನೈಸನ್ಸ್’ (2019):
ಬಹ್ರೇನ್ ದೇಶಕ್ಕೆ ಭೇಟಿ ನೀಡಿದ ಇತಿಹಾಸದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದಾಗ, ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸಿದ್ದಕ್ಕಾಗಿ ಅಲ್ಲಿನ ರಾಜರು ಈ ಉನ್ನತ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.ಈ ಎಲ್ಲಾ ಗೌರವಗಳು ಜಾಗತಿಕ ವೇದಿಕೆಯಲ್ಲಿ ಭಾರತದ ವಸುಧೈವ ಕುಟುಂಬ ಎಂಬ ತತ್ವಕ್ಕೆ ಸಿಕ್ಕ ದೊಡ್ಡ ಮನ್ನಣೆಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ವದ ಮೂಲೆ ಮೂಲೆಗಳಿಂದ ಲಭಿಸಿರುವ ಈ ಎಲ್ಲಾ ಅತ್ಯುನ್ನತ ಗೌರವಗಳು ಭಾರತದ ಬದಲಾಗುತ್ತಿರುವ ಜಾಗತಿಕ ಚಿತ್ರಣವನ್ನು ತೋರಿಸುತ್ತವೆ. ಇಂದು ಭಾರತವು ಕೇವಲ ಒಂದು ದೇಶವಾಗಿ ಉಳಿದಿಲ್ಲ, ಬದಲಿಗೆ ಜಾಗತಿಕ ಬಿಕ್ಕಟ್ಟುಗಳನ್ನು ಪರಿಹರಿಸುವ, ನೆರೆಹೊರೆಯ ದೇಶಗಳಿಗೆ ಕಷ್ಟಕಾಲದಲ್ಲಿ ನೆರವಾಗುವ ಮತ್ತು ಜಾಗತಿಕ ಶಾಂತಿಗಾಗಿ ಶ್ರಮಿಸುವ ಶಕ್ತಿಯಾಗಿ ಹೊರಹೊಮ್ಮಿದೆ. ವಿಶ್ವದ ವಿವಿಧ ದೇಶಗಳು ನೀಡಿರುವ ಈ ಗೌರವಗಳು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತಹ ವಿಷಯವಾಗಿದೆ.
ದೆಹಲಿ ಸೆಪ್ಟಿಕ್ ಟ್ಯಾಂಕ್ ದುರಂತ: ಬಡ ಕಾರ್ಮಿಕರ ಜೀವ ಹಿಂಡುತ್ತಿರುವ ನಿರ್ಲಕ್ಷ್ಯದ ಕಹಿ ಸತ್ಯ
